ಅವನು ತನ್ನ ಹದಿನೈದನೇ ವರ್ಷದಲ್ಲಿ ಪತ್ರಿಕೆಯೊಂದರ ಅಪರಾಧ ವರದಿಗಾರನಾದ. ಹದಿ ಹರೆಯದಲ್ಲಿದ್ದಾಗಲೇ ತನ್ನ ಸೋದರ ಸಂಬಂಧಿಯೊಬ್ಬಳ ಜೊತೆ ಓಡಿ ಹೋದ. ತಮ್ಮ ಮದುವೆಯ ಕಥೆಯನ್ನೇ ಒಂದು ಕಾಮಿಕ್ ಕಾದಂಬರಿಯಾಗಿ ಬರೆದು ಹೆಸರು ಮಾಡಿದ. ತನ್ನ ರಾಜಕೀಯ ಮಹತ್ವಾಕಾಂಕ್ಷೆಗಳು ಬಲಿತಾಗ ಬಲಪಂಥೀಯ ರಾಜಕಾರಣವನ್ನು ಅಪ್ಪಿಕೊಂಡು ಪೆರುವಿನ ಅಧ್ಯಕ್ಷೀಯ ಚುನಾವಣೆಗೂ ನಿಂತು ಸೋತ ಅತ್ಯಂತ ಸಂಕೀರ್ಣ ವ್ಯಕ್ತಿತ್ವದ ಅದ್ಭುತ ಕಾದಂಬರಿಕಾರ ಮಾರಿಯೋ ವೆರ್ಗಾಸ್ ಲೋಸಾನಿಗೆ ಈ ವರ್ಷದ ನೊಬೆಲ್ ಸಂದಿದೆ. ‘ಒಳ್ಳೆಯ ಕಾದಂಬರಿಕಾರ ಆದರೆ ಕೆಟ್ಟ ರಾಜಕಾರಣಿ’ ಎಂದು ವಿಮರ್ಶಕರು ಗುರುತಿಸುವ ಲೋಸಾನದ್ದು ಸುಲಭ ವ್ಯಾಖ್ಯಾನಕ್ಕೆ ಒದಗುವ ವ್ಯಕ್ತಿತ್ವವಲ್ಲ.
ಒಂದು ಸಿದ್ಧಾಂತ ಅಥವಾ ಕಾರಣಕ್ಕಾಗಿ ರಾಜಕೀಯಕ್ಕೆ ಇಳಿಯುವ ಸಾಹಿತಿಗಳು ಪ್ರಪಂಚದಾದ್ಯಂತ ಕಾಣಸಿಗುತ್ತಾರೆ. ಕೈಗಾ ವಿರೋಧಿಸಿ ಕಾರಂತರು ಚುನಾವಣೆಗೆ ಸ್ಪರ್ಧಿಸಿದಾಗ ಅವರು ಸ್ವತಃ ಪ್ರಚಾರಕ್ಕೆ ಇಳಿಯದೇ ಇದ್ದರೂ ಅವರು ಗೆಲ್ಲಲಿ ಎಂದು ಅವರ ಅಭಿಮಾನಿಗಳೆಲ್ಲಾ ಹಾರೈಸಿದ್ದರು. ಆದರೆ ಲೋಸಾ ಚುನಾವಣೆಗೆ ಸ್ಪರ್ಧಿಸಿದಾಗ ಅವನ ಅಭಿಮಾನಿಗಳು ‘ಲೋಸಾ ಸೋಲಲಿ’ ಎಂದುಕೊಂಡರು. ಇದಕ್ಕೆ ಲೋಸಾ ಅಪ್ಪಿಕೊಂಡಿದ್ದ ಸಿದ್ಧಾಂತ ಕಾರಣ ಎಂಬುದಕ್ಕಿಂತ ಅವನ ರಾಜಕೀಯ ಮಹತ್ವಾಕಾಂಕ್ಷೆ ಸಾಹಿತ್ಯವನ್ನು ಬಲಿತೆಗೆದುಕೊಳ್ಳುತ್ತದೆಯೇನೋ ಎನ್ನುವ ಭಯ ಎಂಬುದು ಹೆಚ್ಚು ಸರಿ.
ಲೋಸಾ ತನ್ನ ‘ಫಿಶ್ ಇನ್ ದ ವಾಟರ್’ ಎಂಬ ನೆನಪುಗಳ ಸಂಪುಟದಲ್ಲಿ ಹೇಳಿಕೊಂಡಿರುವಂತೆ- ‘ದಿನಕ್ಕೆ ಎರಡು ಗಂಟೆಗಳ ಕಾಲ ಓದು ಮತ್ತು ಬರೆಹಕ್ಕೆ ಮೀಸಲಿಟ್ಟಿದ್ದೆ’. ಅಧ್ಯಕ್ಷೀಯ ಅಭ್ಯರ್ಥಿಯಾಗಿ ಬಿರುಸಿನ ಪ್ರಚಾರದಲ್ಲಿ ತೊಡಗಿರುವಾಗಲೂ ಅವನ ಬರೆಹ ಮತ್ತು ಓದುಗಳು ಅವನ ನಿರ್ಧಾರದಂತೆ ಅಲ್ಲದಿದ್ದರೂ ಬಿಡುವಿಲ್ಲದೆ ಮುಂದುವರಿದಿದ್ದವು.
1960ರ ದಶಕದ ಲ್ಯಾಟಿನ್ ಅಮೆರಿಕಾ ಸಾಹಿತ್ಯದ ಉತ್ಕರ್ಷದ ಕಾಲಘಟ್ಟದಲ್ಲಿ ಪ್ರಪಂಚದ ಗಮನ ಸೆಳೆದ ಲೋಸಾ 1982ರಲ್ಲಿ ನೊಬೆಲ್ ಪಡೆದ ಕೊಲಂಬಿಯಾದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ನ ಗೆಳೆಯನಾಗಿದ್ದವನು. ಆದರೆ 1997ರಲ್ಲಿ ಮೆಕ್ಸಿಕೋದ ಚಿತ್ರಮಂದಿರವೊಂದರಲ್ಲಿ ಮಾರ್ಕ್ವೆಜ್ನ ಮುಖಕ್ಕೆ ಗುದ್ದಿ ‘ನಮ್ಮಿಬ್ಬರ ಸ್ನೇಹ ಇಂದಿಗೆ ಅಂತ್ಯ’ ಎಂದು ಘೋಷಿಸಿದ. ಈ ಪೆಟ್ಟಿನಲ್ಲಿ ಮಾರ್ಕೆಜ್ ಕಣ್ಣಿನ ಭಾಗ ಕರೆಗಟ್ಟಿತ್ತು. ಈ ಹೊಡೆದಾಟಕ್ಕೆ ಏನು ಕಾರಣ ಎಂಬುದು ಇನ್ನೂ ಗಾಸಿಪ್ಗಳಾಗಿಯೇ ಉಳಿದುಕೊಂಡಿವೆ.
ಮಾರ್ಕ್ವೆಜ್ ರಾಜಕೀಯವಾಗಿ ಎಡಪಂಥೀಯ. ಲೋಸಾನ ಭಾಷೆಯಲ್ಲೇ ಹೇಳುವುದಾದರೆ ಆತ ಕ್ಯೂಬಾದ ಫಿಡೆಲ್ ಕ್ಯಾಸ್ಟ್ರೋನ ‘ಆಸ್ಥಾನ ನರ್ತಕಿ’. ಮಾರುಕಟ್ಟೆ ಆರ್ಥಿಕತೆಯ ಪ್ರತಿಪಾದಕ ಮತ್ತು ಕಟ್ಟರ್ ಎಡಪಂಥೀಯನ ನಡುವಣ ವಾಗ್ವಾದ ಈ ಹೊಡೆದಾಟಕ್ಕೆ ಕಾರಣವಾಯಿತು ಎನ್ನುವ ಸಭ್ಯ ಕಾರಣವೊಂದಿದೆ. ಇದಲ್ಲದೆ ಮಾರ್ಕ್ವೆಜ್ನ ಜೀವನ ಚರಿತ್ರಕಾರ ದಾಸ್ಸೋ ಸಾಲ್ದಿವರ್ ಹೇಳುವ ಮತ್ತೊಂದು ಕಾರಣವಿದೆ. ಅದರಂತೆ ಲೋಸಾನ ಹೆಂಡತಿ ಪ್ಯಾಟ್ರಿಸಿಯಾಗೆ ಮಾರ್ಕ್ವೆಜ್ ಹತ್ತಿರವಾಗುತ್ತಿದ್ದುದು ಅವನಿಗೆ ಕೋಪ ತರಿಸಿತ್ತು. ಕಾರಣಗಳೇನೇ ಇದ್ದರೂ ಸಾಹಿತಿಗಳ ಈ ಜಗಳ ಈಗ ಒಂದು ದಂತ ಕಥೆ.
1936ರ ಮಾರ್ಚ್ 28ರಂದು ಹುಟ್ಟಿದ ಜೋರ್ಜ್ ಮಾರಿಯೋ ಪೆದ್ರೋ ವೆರ್ಗಾಸ್ ಲೋಸಾ 1955ರಲ್ಲಿ ತನ್ನ ಸೋದರ ಸಂಬಂಧಿ ಜ್ಯೂಲಿಯಾ ಉರ್ಕಿದಿಯನ್ನು ಮದುವೆಯಾಗಿದ್ದ. ಈ ಮದುವೆಯ ಕಥೆಯೇ 1997ರಲ್ಲಿ ಪ್ರಕಟವಾದ ‘ಆಂಟ್ ಜ್ಯೂಲಿಯಾ ಅಂಡ್ ಸ್ಕ್ರಿಪ್ಟ್ರೈಟರ್’ ಎಂಬ ಕಾದಂಬರಿಯಾಯಿತು. ಈ ಮದುವೆಯ ಆಯಸ್ಸು ಕೇವಲ ಹತ್ತು ವರ್ಷ.ಮತ್ತೆ 1965ರಲ್ಲಿ ಪ್ಯಾಟ್ರಿಶಿಯಾಳನ್ನು ಬಾಳ ಸಂಗಾತಿಯಾಗಿ ಆರಿಸಿಕೊಂಡ ಲೋಸಾಗೆ ಈ ದಾಂಪತ್ಯದಲ್ಲಿ ಇಬ್ಬರು ಗಂಡ ಮಕ್ಕಳು ಮತ್ತು ಒಬ್ಬ ಮಗಳಿದ್ದಾಳೆ. ಪ್ಯಾರಿಸ್, ಲಂಡನ್ ಮತ್ತು ಪೆರುವಿಗೆ ಸಂಚರಿಸುತ್ತಲೇ ಬದುಕುತ್ತಿರುವ ಲೋಸಾ ಇತ್ತೀಚೆಗೆ ಸ್ಪೈನ್ನ ಪೌರತ್ವವನ್ನೂ ಪಡೆದಿದ್ದಾನೆ.
ಪ್ರತಿಭೆ, ಹುಂಬತನ, ರಸಿಕತೆ, ರಾಜಕೀಯ ಮಹತ್ವಾಕಾಂಕ್ಷೆ, ಅಸೂಯೆ ಹೀಗೆ ಎಲ್ಲವೂ ತುಂಬಿಕೊಂಡಿರುವ ವಿಶಿಷ್ಟ ವ್ಯಕ್ತಿತ್ವದ ಈತನ ಇತ್ತೀಚಿನ ಕಾದಂಬರಿ ಈ ವರ್ಷವಷ್ಟೇ ಹೊರಬಂದಿರುವ ‘ಎಲ್ ಸ್ಯುಯೆನೋ ಡೆಲ್ ಸೆಲ್ಟಾ’. ಇದಿನ್ನೂ ಇಂಗ್ಲಿಷ್ಗೆ ಅನುವಾದಗೊಂಡಿಲ್ಲ.